ರಾಂಪುರ
ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ ಹಾಗೂ ಜಿಲ್ಲಾ ಆಡಳಿತ ಕೇಂದ್ರ ನಗರ.  ರೋಹಿಲ್ ಖಂಡ ವಿಭಾಗಕ್ಕೆ ಸೇರಿದ ಈ ಜಿಲ್ಲೆಯ ವಿಸ್ತೀರ್ಣ 2367 ಚಮೀ.  ಜನಸಂಖ್ಯೆ 1498294 (1991).

ಸ್ಥಳೀಯ ರಾಜರ ಆಳ್ವಿಕೆಯಲ್ಲಿದ್ದ ಈ ದೇಶೀ ಸಂಸ್ಥಾನವನ್ನು 1947 ರಲ್ಲಿ ಭಾರತ ಸ್ವತಂತ್ಯವಾದಾಗ ಆಡಳಿತಾಧಿಕಾರಿಯ ಆಡಳಿತಕ್ಕೆ ಒಳಪಟ್ಟು ನೇರ ದೆಹಲಿಯ ಮೇಲ್ವಿಚಾರಣೆಗೆ ಸೇರಿತು.  ಅನಂತರ 1 ಡಿಸೆಂಬರ್ 1949 ರಲ್ಲಿ ಈ ಜಿಲ್ಲೆ ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿತು.  ಈ ಜಿಲ್ಲೆಯ ಉತ್ತರದಲ್ಲಿ ನೈನಿತಾಲ್, ಪಶ್ಚಿಮದಲ್ಲಿ ನೂರಾದಾಬಾದ್, ದಕ್ಷಿಣದಲ್ಲಿ ಬುದಾವನ್ ಪೂರ್ವದಲ್ಲಿ ಬರೈಲಿ ಜಿಲ್ಲೆಗಳು ಸುತ್ತುವರಿದಿವೆ.  ಜಿಲ್ಲೆ  ದಕ್ಷಿಣ ಹಾಗೂ ಆಗ್ನೇಯಕ್ಕೆ ಇಳಿಜಾರಾದ ಫಲವತ್ತಾದ ಮೈದಾನ ಪ್ರದೇಶದಿಂದ ಕೂಡಿದೆ.  ಈ  ಜಿಲ್ಲೆಯ ಉತ್ತರದಲ್ಲಿ ಕೋಸಿ ಮತ್ತು ನಾಹುಲ್ ನದಿಗಳೂ ದಕ್ಷಿಣದಲ್ಲಿ ರಾಮ್‍ಗಂಗಾ ನದಿಯು ಹರಿಯುತ್ತವೆ.  ಗೋಧಿ, ಮುಸುಕಿನ ಜೋಳ, ಬತ್ತ, ವಿವಿಧ ದ್ವಿದಳ ಧಾನ್ಯಗಳು ಮತ್ತು ಕಬ್ಬು ಹೆಚ್ಚಾಗಿ ಬೆಳೆಯುತ್ತಾರೆ.  ಈ ಜಿಲ್ಲೆಯ ದಕ್ಷಿಣದಲ್ಲಿರುವ ಷಹಬಾದ್ ಮತ್ತು ವಾಯುವ್ಯದಲ್ಲಿರುವ ಟಾಂಡ ಇವು ಮುಖ್ಯ ನಗರಗಳು.

ಜಿಲ್ಲಾ ಮುಖ್ಯ ನಗರವಾದ ರಾಂಪುರ ದೆಹಲಿಯ ಪೂರ್ವಕ್ಕೆ 185 ಕಿಮೀ ದೂರದಲ್ಲಿ, ಕೋಸಿ ನದಿಯ ಎಡದಂಡೆಯ ಮೇಲಿದೆ.  ಜನಸಂಖ್ಯೆ 242752 (1991) ಉಕ್ಕು ಮತ್ತು ಸಕ್ಕರೆ ತಯಾರಿಕೆಗೆ ಈ ನಗರ ಪ್ರಸಿದ್ಧ.  ಮಡಕೆ ಕಲೆಯಾದ ಕುಂಬಾರಿಕೆಗೂ ಈ ಊರು ಪ್ರಸಿದ್ಧ.  ರಾಜಾ ಕಾಲೇಜು ಮುಂತಾದ ಶೈಕ್ಷಣಿಕ ಕೇಂದ್ರಗಳಿವೆ.  ರಸ್ತೆ ಮತ್ತು ರೈಲುಮಾರ್ಗದ ಕೇಂದ್ರಸ್ಥಳವೂ ಆಗಿದೆ.

18 ನೆಯ ಶತಮಾನದಲ್ಲಿ ರೋಹಿಲ ಪಠಾಣರು ಈ ಪ್ರದೇಶದಲ್ಲಿ ತಮ್ಮ ಆಡಳಿತ ಸ್ಥಾಪಿಸಿದ್ದರು.  ಔದ್‍ನ ನವಾಬರು ವಾರನ್‍ಹೇಸ್ಟಿಂಗ್ಸ್‍ನ ಸಹಾಯದಿಂದ ಇವರನ್ನು ತಮ್ಮ ಅಧೀನಕ್ಕೆ ಒಳಪಡಿಸಿಕೊಂಡಿದ್ದರು.  ರೋಹಿಲ ಪಠಾಣರ ಪೈಕಿ ಅವನ ಸಂತತಿಯವರೇ ರಾಂಪುರ ನಗರವನ್ನು ಆಳುತ್ತಾ ಬಂದಿದ್ದು ಭಾರತದ ಸ್ವಾತಂತ್ರ್ಯದೊಡನೆ ಈ ಆಳ್ವಿಕೆ ಕೊನೆಗೊಂಡಿತು.	  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ